ಮಿತ ಪ್ರಮಾಣ ಗಾಳಿಯಲ್ಲಿ ಸೌದೆಯನ್ನು ಉರಿಸಿದರೆ ಇದ್ದಿಲಾಗುವುದು. ಇದು ಸರಂಧ್ರಪದಾರ್ಥ. ಅನಿಲಗಳನ್ನೂ ದ್ರಾವಣಗಳಿಂದ ವಿಲೀನ ವಸ್ತುಗಳನ್ನೂ ಸರಾಗವಾಗಿ ಹೀರಿಕೊಳ್ಳುವ ಶಕ್ತಿ ಇದಕ್ಕಿದೆ. ಅವಶೋಷಿತ ವಸ್ತುಗಳು ಇದ್ದಿಲಿನ ಮೈಮೇಲೆ ಶೇಖರಿಸುತ್ತವೆ. ಈ ಗ್ರಹಣ ಸಾಮರ್ತ್ಯವನ್ನು ಕೃತಕ ವಿಧಾನಗಳಿಂದ ಹೆಚ್ಚಿಸಬಹುದು. ಹೀಗೆ ಕಾಯಕಲ್ಪ ಹೊಂದಿದ ಇದ್ದಿಲಿಗೆ ಪಟುಗೊಳಿಸಿದ ಇಂಗಾಲ ಎಂದು ಹೆಸರು. ಇದರ ಮೇಲ್ಮೈ ವಿಸ್ತೀರ್ಣ ಒಂದು ಗ್ರಾಮಿಗೆ 600-2000 ಚದರ ಮೀಟರುಗಳಷ್ಟು ಇರುತ್ತದೆ. ಇದು ಇದ್ದಿಲಿನ ರಂಧ್ರಗಳಲ್ಲಿರುವ ಸ್ಥಳಾವಕಾಶದ ಸೂಚಕವಾಗಿದೆ. ಸಾಮಾನ್ಯ ಇದ್ದಲಿನ ಮೈಗೆ ಹೈಡ್ರೊಕಾರ್ಬನ್ ಪದರಗಳು ಅಂಟಿಕೊಂಡಿರುವುವು. ಅವುಗಳನ್ನು ಉಚ್ಚಾಟಿಸಿ ಕ್ರಿಯಾಕ್ಷೇತ್ರವನ್ನು ವಿಸ್ತರಿಸಬಹುದು. ಇದೇ ಪಟುಗೊಳಿಸುವ ವಿಧಾನಗಳ ಮೂಲೋದ್ದೇಶ. 

ಇಂಗಾಲವನ್ನು ಪಟುಗೊಳಿಸಲು ಇರುವ ನಾನಾ ವಿಧಾನಗಳಲ್ಲಿ ಹೆಚ್ಚು ಬಳಕೆಯಲ್ಲಿರುವ ಒಂದು ವಿಧಾನವನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಲಾಗಿದೆ. ಇಂಗಾಲಯುಕ್ತ ಕಚ್ಚಾವಸ್ತುವನ್ನು (ತೆಂಗಿನ ಚಿಪ್ಪು, ಮರದ ಹೊಟ್ಟು ಇತ್ಯಾದಿ) ಮೊದಲು ಜಿಂಕ್ ಕ್ಲೋರೈಡು ಅಥವಾ ಫಾಸ್ಫಾರಿಕ್ ಆಮ್ಲದಲ್ಲಿ ಚೆನ್ನಾಗಿ ನೆನೆಸಿ 8500 ಸೆ. ಉಷ್ಣತೆಗೆ ಕಾಸುವರು. ಲಭ್ಯವಾದ ಇದ್ದಿಲನ್ನು ತೊಳೆದರೆ ಅದಕ್ಕೆ ಅಂಟಿರುವ ಈ ರಾಸಾಯನಿಕಗಳು ನಿವಾರಣೆಯಾಗುವುವು. ಅನಂತರ ಹಬೆ ಅಥವಾ ಇಂಗಾಲದ ಡೈ ಆಕ್ಸೈಡಿನ ಸಂಪರ್ಕದಲ್ಲಿ 8500-10000 ಸೆ. ಉಷ್ಣತಾಮಿತಿಯಲ್ಲಿ ಬಿಡಲಾಗುವುದು. ಈ ಉತ್ಕರ್ಷಕ ವಾತಾವರಣದ ಫಲವಾಗಿ ಇದ್ದಿಲಿನ ಮೈ ಸ್ವಚ್ಛವಾಗಿ, ಮುಚ್ಚಿಹೋಗಿದ್ದ ರಂಧ್ರಗಳೂ ಕ್ರಿಯಾ ಕೇಂದ್ರಗಳಾದ ಅಸಂತೃಪ್ತ ಇಂಗಾಲದ ಪರಮಾಣುಗಳೂ ವ್ಯಕ್ತವಾಗುವುವು. ಇದ್ದಲಿನ ಮೈ ಅಲ್ಲಲ್ಲಿ ತರಚಿದಂತಾಗಿ ಹೊಸ ಅಸಂತೃಪ್ತ ಪರಮಾಣುಗಳು ಹುಟ್ಟಿಕೊಳ್ಳುವುವು. ಪರಿಣಾಮವಾಗಿ ಇದ್ದಿಲಿನ ವಸ್ತುಗ್ರಾಹಕ ಶಕ್ತಿ ವೃದ್ಧಿಯಾಗುವುದು.
 
ಪಟುಗೊಳಿಸಿದ ಇಂಗಾಲದಲ್ಲಿ ಎರಡು ಮುಖ್ಯ ದರ್ಜೆಗಳಿವೆ: 1. ತೆಂಗಿನ ಚಿಪ್ಪು ಮುಂತಾದ ವಸ್ತುಗಳಿಂದ ತಯಾರಿಸಿದ ಗಟ್ಟಿಯಾದ ಕಾಳುಗಳ ರೂಪದಲ್ಲಿರುವ ಇಂಗಾಲ. ಇದು ಅನಿಲಗಳನ್ನು ಸರಾಗವಾಗಿ ಹೀರಿಕೊಳ್ಳುವುದರಿಂದ ಅನಿಲಗ್ರಾಹಿ ಇಂಗಾಲ ಎನಿಸಿಕೊಂಡಿದೆ. ಇದರಲ್ಲಿ ರಂಧ್ರಗಳ ಸಂಖ್ಯೆ ಹೆಚ್ಚು. ಪ್ರತಿಯೊಂದು ರಂಧ್ರದ ವ್ಯಾಸ 20 ಆಂಗ್ಸ್ಟ್ರಾಮ್ ಮೀರಿರುವುದಿಲ್ಲ. 2. ಎರಡನೆಯ ಬಗೆಯ ಇಂಗಾಲ ದ್ರಾವಣಗಳಿಂದ ಅನಗತ್ಯ ಬಣ್ಣ, ವಾಸನೆಗಳನ್ನು ಹೀರಿಕೊಳ್ಳಬಲ್ಲುದು. ಆದ್ದರಿಂದ ಇದನ್ನು ವರ್ಣಗ್ರಾಹಿ ಎಂದು ಕರೆಯುತ್ತಾರೆ. ಸಸ್ಯಾಂಗಾರ (ಪೀಟ್), ಕಂದುಕಲ್ಲಿದ್ದಿಲು (ಲಿಗ್ನೈಟ್) ಮತ್ತು ಮರದ ಹೊಟ್ಟು ಇದರ ತಯಾರಿಕೆಗೆ ಸೂಕ್ತ ಕಚ್ಚಾ ವಸ್ತುಗಳು. ಕಾಗದ ಕಾರ್ಖಾನೆಗಳು ವಿಸರ್ಜಿಸುವ ಪದಾರ್ಥಗಳಿಂದಲೂ ಇದನ್ನು ರೂಪಿಸಬಹುದು. ಹುಡಿಯ ರೂಪದಲ್ಲಿ ಇದು ಬಳಸಲ್ಪಡುತ್ತದೆ. ವರ್ಣಗ್ರಾಹಕ ಇಂಗಾಲ ಮೇಲೆ ಹೇಳಿದಂತೆ ಸಸ್ಯಜನ್ಯ ವಸ್ತುಗಳಿಂದ ಆಗಿರಬಹುದು; ಇಲ್ಲವೇ ಪ್ರಾಣಿಮೂಲಗಳಿಂದ ಪಡೆದುದಾಗಿರಬಹುದು. ಪ್ರಾಣಿಗಳ ಎಲುಬುಗಳಿಂದ ತಯಾರಿಸಿದ ಮೂಳೆ ಇದ್ದಿಲು ಇದಕ್ಕೆ ಉದಾಹರಣೆ. ಇದರಲ್ಲಿ ಶೇ.90% ಹೈಡ್ರಾಕ್ಸಿ ಅಪಟೈಟ್ ಆಗಿದ್ದು ಉಳಿದ ಭಾಗ ಇಂಗಾಲವಾಗಿರುತ್ತದೆ. 

ರಾಸಾಯನಿಕ ಮತ್ತು ಆಹಾರ ಉತ್ಪನ್ನಗಳನ್ನು ಶುದ್ಧಿ ಮಾಡಲು ಬಳಸುವ ಇಂಗಾಲದಲ್ಲಿ ನಿರವಯವ ಕಲ್ಮಷಗಳು ಇರಕೂಡದು. ಇದರ ಸಲುವಾಗಿ ಮೊದಲು ಖನಿಜಾಮ್ಲಗಳಿಂದಾ ಅನಂತರ ನೀರಿನಿಂದ ತೊಳೆಯಬೇಕು. ಉತ್ತಮ ದರ್ಜೆಯ ಪಟುಗೊಳಿಸಿದ ಇಂಗಾಲದಲ್ಲಿ ಶೇ.1 ಕ್ಕಿಂತ ಹೆಚ್ಚು ದ್ರಾವ್ಯ ಕಲ್ಮಷಗಳು ಇರಕೂಡದು. 

ಯುದ್ಧಕಾಲದಲ್ಲಿ ಸೈನಿಕರಿಗೆ ವಿಷವಾಯು ಪ್ರಯೋಗವಾಗದಂತೆ ಕಾಪಾಡಲು ಮೊಗವಾಡಗಳನ್ನು ಧರಿಸಲೇಬೇಕೆಂಬ ನಿಯಮವಿದೆ. ಅಂಥ ಮೊಗವಾಡಗಳಲ್ಲಿ ಪಟುಗೊಳಿಸಿದ ಇಂಗಾಲವಿರುತ್ತದೆ. ಅಂದರೆ ಪಟುಗೊಳಿಸಿದ ಇಂಗಾಲದ ಬಳಕೆ ಸೇನಾಕ್ಷೇತ್ರಕ್ಕೇ ಸೀಮಿತವಾಗಿಲ್ಲ. ನಾಗರಿಕ ಜನಜೀವನದಲ್ಲೂ ಅದು ನಿರ್ವಹಿಸುತ್ತಿರುವ ಜವಾಬ್ದಾರಿ ಗುರುತರವಾದುದು. ಅದಕ್ಕೆ ಅಸಂಖ್ಯಾತ ನಿದರ್ಶನಗಳನ್ನು ನೀಡಬಹುದು. ಅನೇಕ ಕೈಗಾರಿಕೆಗಳಲ್ಲಿ ಉಪಯುಕ್ತ ಲೀನಕಾರಿಗಳು ಆವಿಯ ರೂಪದಲ್ಲಿ ಕಾರ್ಖಾನೆಯ ಗಾಳಿ ಅಥವಾ ಧೂಮದಲ್ಲಿ ಬೆರೆತು ಹಾಳಾಗಿಹೋಗುವ ಸಂಭವವಿದೆ. ಅದನ್ನು ಪಾರು ಮಾಡಲು ಪಟುಗೊಳಿಸಿದ ಇಂಗಾಲದ ಪದರಗಳ ಮೂಲಕ ಹಾಯಿಸುವರು. ಆಗ ಲೀನಕಾರಿ ಹೀರಲ್ಪಡುವುದು ನಿರ್ದಿಷ್ಟ ಅವಧಿಯ ಅನಂತರ ಹಬೆಯನ್ನು ಹಾಯಿಸಿದರೆ ಅದರೊಡನೆ ಅವಶೋಷಿತ ಲೀನಕಾರಿ ಹೊರಬೀಳುವುದು. ತಣಿಸಿದಾಗ ಲೀನಕಾರಿ ಪ್ರತ್ಯೇಕವಾಗುವುದು. ಸುಮಾರು ಇದೇ ತತ್ತ್ವದ ಅನ್ವಯದಿಂದ ಪೆಟ್ರೋಲಿಯಂ ಎಣ್ಣೆಯಲ್ಲಿರುವ ಹೈಡ್ರೊಕಾರ್ಬನ್ನುಗಳನ್ನು ಬೇರ್ಪಡಿಸುವರು. ಕಿರಿಯ ಪ್ಯಾರಫಿನ್ನುಗಳ ಕುದಿಯುವ ಬಿಂದುಗಳಲ್ಲಿ ಗಣನೀಯ ಅಂತರವಿರುವುದಿಲ್ಲ. ಆದ್ದರಿಂದ ಆಂಶಿಕ ಬಾಷ್ಪೀಕರಣ ವಿಧಾನದಿಂದ ಬೇರ್ಪಡಿಸುವಂತಿಲ್ಲ. ಆದರೆ ಪಟುಗೊಳಿಸಿದ ಇಂಗಾಲ ಅವನ್ನು ಹಂತ ಹಂತವಾಗಿ ತನ್ನ ಒಲವಿಗೆ ಅನುಗುಣವಾಗಿ ಹೀರಿಕೊಳ್ಳುವುದರಿಂದ ಆಂಶಿಕ ಅವಶೋಷಣಾ ವಿಧಾನ ಅನುಕರಣಯೋಗ್ಯವಾಗಿದೆ. 

ಹೈಡ್ರೊಜನ್, ಇಂಗಾಲದ ಡೈ ಆಕ್ಸೈಡ್, ಇಂಗಾಲದ ಮಾನಾಕ್ಸೈಡ್, ಅಸಿಟಲೀನ್ ಮುಂತಾದ ಅನಿಲಗಳನ್ನು ಕಲುಷಿತಗೊಳಿಸುವ ತೈಲದ ಆವಿ ಮತ್ತು ಗಂಧಕದ ಸಂಯುಕ್ತಗಳನ್ನು ಪಟುಗೊಳಿಸಿದ ಇಂಗಾಲ ಹೀರಿಕೊಳ್ಳಬಲ್ಲದು. ಚಲನಚಿತ್ರ ಮಂದಿರಗಳು, ಉಪಾಹಾರ ಗೃಹಗಳು, ಆಡಳಿತ ಭವನಗಳು, ರೈಲುಬಂಡಿಗಳು, ವಿಮಾನಗಳು ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಗಾಳಿನಿಯಂತ್ರಣ ವ್ಯವಸ್ಥೆ ಇರುವುದಷ್ಟೆ. ಅಲ್ಲಿ ಪಟುಗೊಳಿಸಿದ ಇಂಗಾಲದ ಬಳಕೆ ಅನಿವಾರ್ಯ. ವೀನೈಲ್ ಕ್ಲೋರೈಡ್, ಕಾರ್ಬೊನಿಲ್ ಕ್ಲೋರೈಡ್ ಮತ್ತು ಸಲ್ಫ್ಯೂರಿಕ್ ಕ್ಲೋರೈಡುಗಳ ಸಂಯೋಜನೆಯಲ್ಲಿ ಹೈಡ್ರೋಜಿನೇಷನ್ ಮೊದಲಾದ ಸಾವಯವ ಕ್ರಿಯೆಗಳಲ್ಲಿ ವೇಗವರ್ಧಕಗಳಾಗಿ ಅಥವಾ ಅವುಗಳ ವಾಹಕವಾಗಿ ಅನಿಲ ಅಥವಾ ವರ್ಣಗ್ರಾಹಿ ಇಂಗಾಲದ ವಿನಿಯೋಗವಾಗುತ್ತಿದೆ. 

ವರ್ಣಗ್ರಾಹಿ ಇಂಗಾಲದ ಮುಖ್ಯ ಉಪಯೋಗ ಕಚ್ಚಾ ಸಕ್ಕರೆಯ ಸಂಸ್ಕರಣದಲ್ಲಿ. 19ನೆಯ ಶತಮಾನದಿಂದಲೂ ಇದಕ್ಕಾಗಿ ಮೂಳೆ ಇದ್ದಲು ಉಪಯೋಗವಾಗುತ್ತಿದೆ. ಸಕ್ಕರೆಯ ಪಾಕವನ್ನು ಇದ್ದಿಲಿನ ಪದರಗಳ ಮೂಲಕ ಜಿನುಗಲು ಬಿಡಲಾಗುವುದು. ಆಗ ಸಕ್ಕರೆಯಲ್ಲಿರುವ ಬಣ್ಣ ಮತ್ತು ನಿರವಯವ ವಸ್ತುಗಳು ಹೀರಲ್ಪಡುವುವು. ಸಕ್ಕರೆ ಶುಭ್ರವಾಗುವುದು. ಇದ್ದಿಲನ್ನು ನೀರಿನಿಂದ ತೊಳೆದು ಅದಕ್ಕೆ ಅಂಟಿರುವ ಸಕ್ಕರೆಯನ್ನೂ ಪಡೆಯಬಹುದು. ಅನಂತರ ಇದ್ದಿಲನ್ನು ಗೂಡುಗಳಲ್ಲಿ ಕಾಸಿ ಪುನಶ್ಚೇತನಗೊಳಿಸಲಾಗುವುದು. ಈಗ ಇಂಗಾಲದ ಒಂದಂಶ ಉರಿದುಹೋಗುವುದು ನಿಜ. ಆದರೆ ನಿರ್ವರ್ಣೀಕರಣ ಕೋಶಗಳಲ್ಲಿ ಅದು ಹೀರಿಕೊಂಡಿರುವ ಶರ್ಕರೇತರ ಸಾವಯವ ಇಂಗಾಲ ಈ ನಷ್ಟವನ್ನು ತುಂಬುತ್ತದೆ. ಪೌರಸ್ತ್ಯ ದೇಶಗಳಲ್ಲೂ ಇತ್ತೀಚೆಗೆ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲೂ ಸಕ್ಕರೆಯ ಸಂಸ್ಕರಣಕ್ಕೆ ಸಸ್ಯಜನ್ಯ ಇಂಗಾಲವನ್ನು ವಿಶೇಷವಾಗಿ ಬಳಸುತ್ತಿದ್ದಾರೆ. ಸಹಸ್ರಾರು ಟನ್ ಪಟುಗೊಳಿಸಿದ ಇಂಗಾಲ ಸಕ್ಕರೆ ಉದ್ಯಮದಲ್ಲಿ ಖರ್ಚಾಗುತ್ತಿದೆ.
 
ಸಾರ್ವಜನಿಕ ನೀರು ಸರಬರಾಜಿನ ವ್ಯವಸ್ಥೆಯಲ್ಲಿ ಸಸ್ಯಜನ್ಯ ಇಂಗಾಲದ ಬಳಕೆ ಸರ್ವಸಾಮಾನ್ಯವಾಗಿದೆ. ಜಲಮೂಲದಲ್ಲಿರುವ ಪಾಚಿಗಳು ಕೊಳೆಯುವುದರಿಂದ ಅಥವಾ ಕೈಗಾರಿಕೆಗಳು ವಿಸರ್ಜಿಸುವ ಮಲಿನ ವಸ್ತುಗಳು ಬೆರೆಯುವುದರಿಂದ ನೀರಿಗೆ ಅಹಿತ ರುಚಿ, ವಾಸನೆಗಳು ಪ್ರಾಪ್ತವಾಗುತ್ತವೆ. ಇವನ್ನು ನಿರ್ನಾಮ ಮಾಡದ ಹೊರತು ನೀರು ಪಾನಯೋಗ್ಯವಾಗಲಾರದು. ಅದಕ್ಕಾಗಿ ಪಟುಗೊಳಿಸಿದ ಇಂಗಾಲ ಬಳಸಲ್ಪಡುತ್ತದೆ. ನೀರಿನಲ್ಲಿರುವ ವಿಲಂಬಿತ ಕಶ್ಮಲಗಳು ತಳವೂರುವಂತೆ ಮಾಡಲು ಪಟಿಕವನ್ನು ಕೊಡಿಸುತ್ತೇವಷ್ಟೆ. ಆಗ ಒಂದು ಮಿಲಿಯನ್ ಭಾಗ ನೀರಿಗೆ 2-5 ಭಾಗದಷ್ಟು ಇಂಗಾಲ ಸೇರಿಸಿದರೆ ಸಾಕು. 

ಕೈಗಾರಿಕೆಗೆ ಅಗತ್ಯವಾದ ಶುದ್ಧನೀರನ್ನು ಪಡೆಯಲೂ ಇದೇ ವಿಧಾನವನ್ನು ಅನುಸರಿಸಲಾಗುತ್ತದೆ. ದ್ರಾಕ್ಷಾರಸ ಮತ್ತು ಇತರ ಆಲ್ಕೊಹಾಲಿನ ಪಾನೀಯಗಳ ತಯಾರಿಕೆಗೆ ಅಗಾಧಪ್ರಮಾಣದ ನೀರಿನ ಅಗತ್ಯವುಂಟು. ಅಂಥ ನೀರು ರೋಗಾಣುರಹಿತವಾಗಿರಬೇಕು. ಆದ್ದರಿಂದ ಅದನ್ನು ಶುದ್ಧಿಮಾಡಲು ಅಧಿಕ ಪ್ರಮಾಣದಲ್ಲಿ ಕ್ಲೋರೀನ್ ಪ್ರಯೋಗಿಸ ಬೇಕಾಗುತ್ತದೆ. ನೀರಿನಲ್ಲಿ ಹೆಚ್ಚುವರಿ ಕ್ಲೋರೀನ್ ಉಳಿಯಬಾರದು. ಇದನ್ನು ಅವಶೋಷಿಸಲೂ ಇತರ ವಾಸನೆ ರುಚಿ ಮೂಲಗಳನ್ನು ತೊಡೆದು ಹಾಕಲೂ ಇಂಗಾಲ ನೆರವಾಗುತ್ತದೆ. ಕೊಬ್ಬು, ತೈಲ ಮೇಣ ಇತ್ಯಾದಿ ಎಸ್ಟರುಗಳು, ಗ್ಲಿಸರಾಲ್, ಗ್ಲೈಕಾಲ್ ಇತ್ಯಾದಿ ಆಲ್ಕೊಹಾಲುಗಳು, ಸ್ವಲ್ಫ ಸಂಯುಕ್ತಗಳು, ಜೀವಾತುಗಳು, ಜೀವನಿರೋಧಕಗಳು (ಆಂಟಿಬಯೊಟಿಕ್ಸ್) ಮುಂತಾದ ಔಷಧ ಸಾಮಗ್ರಿಗಳು, ಅಸಿಟಿಕ್, ಬೆಂಜೋಯಿಕ್ ಸಿಟ್ರಿಕ್, ಫ್ರ್ಯುಮ್ಯಾರಿಕ್, ಮೆಲೇಯಿಕ್ ಮತ್ತು ಇತರ ಆಮ್ಲಗಳು, ನೈಸರ್ಗಿಕ ಮತ್ತು ಕೃತಕ ಕೆಫೀನ್ ಛಾಯಾಗ್ರಹಣದಲ್ಲಿ ಬಳಸುವ ರಾಸಾಯನಿಕಗಳು ಜೆಲಾಟಿನ್ ಪೆಕ್ಟಿನ್ ಮುಂತಾದ ಆಹಾರ ಸಾಮಗ್ರಿಗಳು, ಬಣ್ಣ ಮಧ್ಯವರ್ತಿಗಳು ಮತ್ತು ಇನ್ನೂ ಅನೇಕ ಉತ್ಪನ್ನಗಳ ಸಂಸ್ಕರಣ ಪಟುಗೊಳಿಸಿದ ಇಂಗಾಲವಿಲ್ಲದೆ ನಡೆಯುವಂತಿಲ್ಲ. 

ಇತ್ತೀಚೆಗೆ ಪಟುಗೊಳಿಸಿದ ಇಂಗಾಲಕ್ಕೆ ಎರಡು ಪ್ರಮುಖ ಉಪಯೋಗಗಳು ಒದಗಿವೆ. ಹಳೆಯ ರಬ್ಬರನ್ನು ಸಂಸ್ಕರಿಸಿ ಅದರಿಂದ ತೆಳುಬಣ್ಣದ ಅಥವಾ ಬಿಳಿಯ ರಬ್ಬರಿನ ವಸ್ತುಗಳನ್ನು ಮಾಡುತ್ತಾರೆ. ಸಂಸ್ಕರಣ ಕಾಲದಲ್ಲಿ ಉಪಯೋಗಿಸಿದ ಎಣ್ಣೆಗಳು ರಬ್ಬರಿನ ಒಳಪದರಗಳಿಂದ ಹೊರಕ್ಕೆ ಹರಡಿ ಹಳದಿ ಕಲೆಗಳನ್ನುಂಟುಮಾಡಿ ವಿರೂಪ ಗೊಳಿಸುವುವು. ಪಟುಗೊಳಿಸಿದ ಇಂಗಾಲವನ್ನು ರಬ್ಬರಿನೊಂದಿಗೆ ಅರೆದು ಅನಂತರ ಉಪಯೋಗಿಸಿದರೆ ಈ ತೊಂದರೆ ತಪ್ಪುವುದು. 

ದ್ರವವಸ್ತುಗಳನ್ನು ಬಹುಕಾಲ ದಾಸ್ತಾನುಮಾಡಿದಾಗ ಅಥವಾ ಶೈತ್ಯಗೊಳಿಸಿದಾಗ ಮಬ್ಬಾಗುವುದುಂಟು. ಆಲ್ಕೊಹಾಲ್ ಪಾನೀಯಗಳ ತಯಾರಿಕೆಯಲ್ಲಿ ಉಪಯೋಗಿಸುವ ಕೆಲವು ಸಕ್ಕರೆಗಳಿಂದಲೂ ಮತ್ತು ಪ್ರೋಟೀನುಗಳು ಒತ್ತರಿಸುವುದರಿಂದಲೂ ಹೀಗಾಗುತ್ತದೆ. ಪಟುಗೊಳಿಸಿದ ಇಂಗಾಲ ಇಂಥ ಅದ್ರಾವ್ಯ ವಸ್ತುಗಳನ್ನು ಧರಿಸಿ ದ್ರವವಸ್ತುವನ್ನು ಸ್ವಚ್ಛವಾಗಿರಿಸುತ್ತದೆ. 

ಅನೇಕ ಆಕರ್ಷಕ ವ್ಯವಹಾರನಾಮಗಳಿಂದ (ಉದಾಹರಣೆ, ನ್ಯೂಚಾರ್ ಮಿಂಚಾರಾ ಫಿಲ್ಟ್ಚಾರ್ ಕಾರ್ಬೆಕ್ಸ್, ಕ್ಲಿಫ್ಚಾರ್, ಬೋನ್ಚಾರ್, H.ಗV.W.M -ಪಟುಗೊಳಿಸಿದ ಇಂಗಾಲ, ಸೂಚಾರ್, ಇತ್ಯಾದಿ). ಮಾರುಕಟ್ಟೆಯಲ್ಲಿರುವ ಪಟುಗೊಳಿಸಿದ ಇಂಗಾಲದ ವ್ಯಾಪಕಬಳಕೆಯನ್ನು ಕೆಳಕಂಡ ಪಟ್ಟಿಯಲ್ಲಿ ಕ್ರೋಡೀಕರಿಸಲಾಗಿದೆ. 

I ಅನಿಲ ವಸ್ತುಗಳ ಅವಶೋಷಣೆ. (i) ನೈಸರ್ಗಿಕ ಅನಿಲದಿಂದ ಪೆಟ್ರೋಲ್ ಸಂಪಾದನೆ. (ii) ಕೃತಕ ರೇಷ್ಮೆ ಮತ್ತು ಚರ್ಮ, ಶುಷ್ಕಮಾರ್ಜಕ ಲೋಹಗಳಿಂದ ಜಿಡ್ಡು ನಿವಾರಣೆ, ಪಾರಕ ಹೊದಿಕೆಗಳು ಮತ್ತು ಫಿಲ್ಮುಗಳು, ರಬ್ಬರ್ ಉತ್ಪನ್ನಗಳು, ಪ್ಲಾಸ್ಟಿಕ್ಕುಗಳು ಮುಂತಾದ ಕೈಗಾರಿಕೆಗಳಲ್ಲಿ ಆವಿಯಾಗಿ ಬಿಡುವ ಲೀನಕಾರಿಕಗಳ ಸಂಪಾದನೆ. (iii) ಹೈಡ್ರೊಜನ್, ನೈಟ್ರೊಜನ್, ಹೀಲಿಯಂ, ಅಸಿಟಲಿನ್, ಅಮೋನಿಯ, ಇಂಗಾಲದ ಮಾನಾಕ್ಸೈಡ್ ಮತ್ತು ಡೈಆಕ್ಸೈಡ್ಗಳಲ್ಲಿರುವ ಕಶ್ಮಲಗಳ ನಿರ್ಮೂಲನ. (iv) ಗಾಳಿನಿಯಂತ್ರಣ ವ್ಯವಸ್ಥೆಯಲ್ಲಿ ಹುಟ್ಟುವ ಅಹಿತ ವಾಸನೆಯನ್ನು ಹೋಗಲಾಡಿಸಲು. (v) ಬೆಂಜಾಲ್ ಸಂಪಾದನೆ. 

II ದ್ರವವಸ್ತುಗಳ ಶುದ್ಧೀಕರಣ. (i) ಕಬ್ಬು ಅಥವಾ ಬೀಟ್ ಸಕ್ಕರೆ, ಗ್ಲೂಕೋಸ್ ಇತ್ಯಾದಿಗಳ ಸಂಸ್ಕರಣ. (ii) ಹತ್ತಿಬೀಜದ ಎಣ್ಣೆ, ಕೊಬ್ಬರಿ ಎಣ್ಣೆ, ಹಂದಿಯ ಕೊಬ್ಬು ಮತ್ತು ಖನಿಜ ತೈಲಗಳ ಶುದ್ಧೀಕರಣ. (iii) ಜೆಲಾಟಿನ್, ವಿನಿಗರ್, ಪೆಕ್ಟಿನ್, ಕೊಕೊ ಬೆಣ್ಣೆ, ಹಣ್ಣಿನ ರಸಗಳು ಮತ್ತು ಆಲ್ಕೊಹಾಲ್ ಪಾನೀಯಗಳಿಂದ ಕಶ್ಮಲ ನಿವಾರಣೆ. (iv) ಔಷಧ ಮತ್ತು ಆಮ್ಲಗಳಾದಿಯಾಗಿ ಇತರ ರಾಸಾಯನಿಕಗಳ ಶುದ್ಧೀಕರಣ. (v) ಕುಡಿಯುವ ನೀರಿನಿಂದ ಬಣ್ಣ, ವಾಸನೆ ಮತ್ತು ರುಚಿಗಳನ್ನು ತೆಗೆಯುವುದು. (vi) ವಿದ್ಯುತ್ ಲೇಪನಕ್ಕೆ ಉಪಯೋಗಿಸಿದ ದ್ರಾವಣಗಳು ಮತ್ತು ಬಳಸಿದ ಎಣ್ಣೆಗಳಿಂದ ಕಶ್ಮಲ ನಿವಾರಣೆ. (vii) ಚಿನ್ನ, ಬೆಳ್ಳಿ, ಮುಂತಾದ ಲೋಹಗಳನ್ನು ದ್ರಾವಣದಿಂದ ಬೇರ್ಪಡಿಸುವುದು.
 
III ವೈದ್ಯಕೀಯದಲ್ಲಿ. (i) ದೇಹಗತವಾದ ಅನಿಲಗಳು. ನಂಜುಗಳು ಮತ್ತು ಇತರ ವಿಷಗಳನ್ನು ಹೀರಿ ಉಪಶಮನಗೊಳಿಸುವ ಇಂಗಾಲದ ಮಾತ್ರೆಗಳ ತಯಾರಿಕೆ (ಮಕ್ಕಳ ಸಲುವಾಗಿ ಪಟುಗೊಳಿಸಿದ ಇಂಗಾಲವನ್ನು ಅಳವಡಿಸಿರುವ ಬಿಸ್ಕತ್ತುಗಳು ದೊರೆಯುತ್ತವೆ). (ii) ಅವಶೋಷಿತ ಸ್ಥಿತಿಯಲ್ಲಿ ಮದ್ದನ್ನು ಪ್ರಯೋಗಿಸಬೇಕಾದ ಸಂದರ್ಭದಲ್ಲಿ. (iii) ನಾರುತ್ತಿರುವ ವ್ರಣಗಳಿಂದ ಹುಟ್ಟುವ ದುರ್ವಾಸನೆಯನ್ನು ಹೋಗಲಾಡಿಸಲು.

IV ವೇಗವರ್ಧಕ ಮತ್ತು ಅದರ ವಾಹಕವಾಗಿ. (i) ಫಾಸ್ಜೀನ್ ಇತ್ಯಾದಿಗಳನ್ನು ತಯಾರಿಸುವ ಕ್ಲೋರಿನೇಷನ್ ಕ್ರಿಯೆಗಳಲ್ಲಿ. (ii) ಹೈಡ್ರೋಜಿನೇಷನ್ ಮಾಡುವಾಗ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ